ರೋಹಿಂಗ್ಯಾಗಳ ಗಡಿಪಾರಿಗೆ ಸುಪ್ರೀಂ ತಡೆ


ಹೊಸದಿಲ್ಲಿ: ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆಯು ಅತ್ಯಂತ ಗಂಭೀರವಾದುದಾಗಿದ್ದು, ಮಾನವೀಯತೆ ಮತ್ತು ರಾಷ್ಟ್ರೀಯ ಭದ್ರತೆ ವಿಚಾರಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸರಕಾರ ಮಹತ್ವದ ಪಾತ್ರ ವಹಿಸಬೇಕೆಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ನವೆಂಬರ್‌ 21ರಿಂದ ರೋಹಿಂಗ್ಯಾ ಪ್ರಕರಣದ ವಿಸ್ತೃತ ವಿಚಾರಣೆ ನಡೆಸುವುದಾಗಿ ತಿಳಿಸಿರುವ ನ್ಯಾಯಾಲಯ, ಅಲ್ಲಿಯವರೆಗೂ ನಿರಾಶ್ರಿತರನ್ನು ಗಡಿಪಾರು ಮಾಡದಂತೆ ಸರಕಾರಕ್ಕೆ ಮೌಖಿಕ ಆದೇಶ ನೀಡಿದೆ.
ನ್ಯಾಯಾಲಯ ಈ ವಿಚಾರವಾಗಿ ಲಿಖಿತ ಆದೇಶ ನೀಡಿದರೆ, ಅದು ಅಂತಾರಾಷ್ಟ್ರೀಯ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂಬ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಕಳವಳದ ಮೇರೆಗೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಈ ಆದೇಶ ನೀಡಿ ವಿಚಾರಣೆ ಮುಂದೂಡಿತು.
ಯಾವುದೇ ತುರ್ತು ಸಂದರ್ಭಗಳಲ್ಲಿ ನ್ಯಾಯಾಲಯದ ಬಾಗಿಲು ತಟ್ಟಲು ರೋಹಿಂಗ್ಯಾಗಳಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿತು.
''ಮುಂದಿನ ವಿಚಾರಣೆ ದಿನಾಂಕದ ಒಳಗಾಗಿ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಾದರೆ, ಅರ್ಜಿದಾರರು ನ್ಯಾಯಾಲಯಕ್ಕೆ ಬರಬಹುದು,'' ಎಂದು ನ್ಯಾಯಪೀಠ ಹೇಳಿತು.
ರೋಹಿಂಗ್ಯಾಗಳ ಪರ ವಿಚಾರಣೆಗೆ ಹಾಜರಾದ ಹಿರಿಯ ನ್ಯಾಯವಾದಿ ಫಾಲಿ ಎಸ್‌ ನಾರಿಮನ್‌ ಅವರು ''ಎಲ್ಲಾ ರೋಹಿಂಗ್ಯಾ ಮುಸ್ಲಿಮರೂ ಭಯೋತ್ಪಾದಕರಲ್ಲ. ಸರಕಾರ ಸಾರಾಸಗಟಾಗಿ ಅವರನ್ನು ಗಡಿಪಾರು ಮಾಡುವ ಆದೇಶ ಹೊರಡಿಸುವುದು ಸಲ್ಲದು,'' ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರೋಹಿಂಗ್ಯಾಗಳ ವಿಚಾರದಲ್ಲಿ ಮಾನವೀಯ ಅಂಶವೂ ಇರುವುದು ನಿಸ್ಸಂಶಯವಾದರೂ ರಾಷ್ಟ್ರೀಯ ಹಿತಾಸಕ್ತಿಯನ್ನೂ ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ ಎಂದರು.
''ಮಕ್ಕಳು ಮತ್ತು ಮಹಿಳೆಯರು ಅಮಾಯಕರು. ಒಂದು ಸಾಂವಿಧಾನಿಕ ನ್ಯಾಯಾಲಯವಾಗಿ, ನಾವು ಅವರನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಸರಕಾರವೂ ಅವರ ವಿಚಾರವನ್ನು ಕಡೆಗಣಿಸುವುದಿಲ್ಲ ಎಂದು ಅಪೇಕ್ಷಿಸುತ್ತೇವೆ,'' ಎಂದು ನ್ಯಾಯಪೀಠ ಹೇಳಿತು.
''ಯಾವುದೇ ವ್ಯಕ್ತಿಯಿಂದ ತಪ್ಪು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ ಮುಂದಿನ ವಿಚಾರಣೆ ಮುಗಿಯುವವರೆಗೂ ಎಲ್ಲರನ್ನೂ ಒಟ್ಟಿಗೆ ಗಡಿಪಾರು ಮಾಡಬೇಡಿ,'' ಎಂದು ನ್ಯಾಯಪೀಠ ಸೂಚಿಸಿತು.


Comments

Popular posts from this blog

ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರಿಂದ ಇಫ್ತಾರ್ ಕೂಟ

ರಂಝಾನ್ ಪ್ರಯುಕ್ತ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ವಿತರಿಸಿದ ಶಿಪಲ್ ರಾಜ್

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್