ಜಿಲ್ಲೆಯ ಅಕ್ರಮ ಚಟುವಟಿಕೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಪಿ.ವಿ ಮೋಹನ್ ಮತ್ತು ಲುಕ್ಮಾನ್ ರವರಿಂದ ಗೃಹ ಮಂತ್ರಿಗಳಿಗೆ ಮನವಿ
ಬೆಂಗಳೂರು: ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಹೇರಳವಾಗಿ ತಾಂಡವವಾಡುತ್ತಿದ್ದು ಡ್ರಗ್ಸ್ ಮಾಫಿಯ, ಗಾಂಜ ದಂದೆ, ಗ್ಯಾಂಗ್ ವಾರ್ ,ಅನೈತಿಕವಾಗಿ ನಡೆಯುತ್ತಿರುವ ಮಸಾಜ್ ಪಾರ್ಲರ್ಗಳು ಜಿಲ್ಲೆಯ ಜನರ ನಿದ್ದೆಗೆಡಹಿದೆ. ಆದ್ದರಿಂದ ಇಂತಹ ಚಟುವಟಿಕೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ ಮೋಹನ್ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಲುಕ್ಮಾನ್ ಕರ್ನಾಟಕ ರಾಜ್ಯದ ಮಾನ್ಯ ಗೃಹ ಮಂತ್ರಿಗಳಾದ ರಾಮಲಿಂಗ ರೆಡ್ಡಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಗೃಹಸಚಿವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಜಿಲ್ಲೆಯ ಯುವಕರು, ವಿದ್ಯಾರ್ಥಿಗಳು ದಿನದಿಂದ ದಿನಕ್ಕೆ ಮಾದಕ ಜಾಲದ ಮೋಹಕ್ಕೆ ಬಲಿಯಾಗಿ ಮಾದಕ ವ್ಯಸನಿಗಳಾಗಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ನಡೆದ ಮೂರು ಕೊಲೆ ಪ್ರಕರಣಗಳಲ್ಲಿ ಗಾಂಜಾ ದಂಧೆಯ ಕರಿನೆರಳ ಛಾಯೆ ಎದ್ದುಕಾಣುತ್ತಿದೆ. ಜಿಲ್ಲೆಯಾದ್ಯಂತ ಮಾದಕ ದ್ರವ್ಯಗಳು ಸುಲಭವಾಗಿ ಯುವಕರ, ವಿದ್ಯಾರ್ಥಿಗಳ ಕೈಗೆಟಕುತ್ತಿದೆ. ಶಾಲಾ ಕಾಲೇಜುಗಳ ಆವರಣದಲ್ಲಿಯೂ ಮಾರಾಟ ನಡೆಯುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಯಲ್ಲಿದೆ ಎಂದು ವಿವರಿಸಿದರು.
ಈ ದಂದೆಯನ್ನು ಮತ್ತು ಇದರ ಹಿಂದಿರುವವರನ್ನು ಹತ್ತಿಕ್ಕುವ ಕೆಲಸ ಸರಕಾರ ನಡೆಸಬೇಕಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿರುವ ನಾರ್ಕೋಟಿಕ್ಸ್ ಸೆಲ್ ಕೇವಲ ಹೆಸರಿಗಷ್ಟೆ ಕಾರ್ಯನಿರ್ವಹಿಸುತಿದ್ದು ಅದನ್ನು ಇನ್ನಷ್ಟು ಬಲಪಡಿಸುವ ಕಾರ್ಯ ನಡೆಯಬೇಕಾಗಿದೆ. ನಾರ್ಕೋಟಿಕ್ಸ್ ಸೆಲ್ನಲ್ಲಿ ಸಿಬ್ಬಂದಿಗಳ ಕೊರತೆ ಮತ್ತು ಅತ್ಯಾಧುನಿಕ ಸಲಕರಣೆಗಳ ಕೊರತೆಯಿದ್ದು ಈಗ ಕಾರ್ಯನಿರ್ವಹಿಸುತ್ತಿರುವ ತಂಡದ ಅಧಿಕಾರಿಗಳಲ್ಲಿ ಕೆಲವು ಅಧಿಕಾರಿಗಳೇ ಈ ದಂಧೆಯಲ್ಲಿ ಶಾಮೀಲಾಗಿರುವುದರಿಂದ ಅಂತಹವರನ್ನು ಬದಲಾಯಿಸಿ ನಿಷ್ಟಾವಂತ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇದರ ಹಿಂದಿರುವ ಜಾಲವನ್ನು ಬುಡಸಮೇತ ಕಿತ್ತೊಗೆಯುವ ಕೆಲಸ ನಡೆಯಬೇಕಾಗಿದೆ ಎಂದರು.
ಜಿಲ್ಲೆಯಾದ್ಯಂತ ಪ್ರತಿಯೊಂದು ಊರು ಮತ್ತು ಗಲ್ಲಿಗಲ್ಲಿಗಳಲ್ಲಿ ಪಾದರಸದಂತೆ ಹಬ್ಬಿ ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳುಗೆಡವುತ್ತಿರುವ ಈ ಅನಿಷ್ಟದ ವಿರುದ್ದ ಪೋಲಿಸ್ ಇಲಾಖೆಯು ಆದಷ್ಟು ಬೇಗ ಜಾಗೃತರಾಗಿ ಕಾರ್ಯನಿರ್ವಹಿಸಬೇಕಾಗಿದೆ.
ಜಿಲ್ಲೆಯ ಕೆಲವು ಭಾಗಗಳು ಕಮೀಷನರ್ ವ್ಯಾಪ್ತಿಗೆ ಮತ್ತು ಕೆಲವು ಭಾಗಗಳು ಐಜಿಯವರ ವ್ಯಾಪ್ತಿಗೆ ಬರುವುದರಿಂದ ಐಜಿ ಮತ್ತು ಕಮೀಷನರ್ ರವರು ಜಂಟಿಯಾಗಿ ಜಿಲ್ಲೆಯ ಶಾಲಾ ಮತ್ತು ಕಾಲೇಜುಗಳಲ್ಲಿ
ವಿದ್ಯಾರ್ಥಿಗಳಿಗೆ ಮಾದಕ ಜಾಲದ ದುಷ್ಪರಿಣಾಮಗಳ ಬಗ್ಗೆ ಸತತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಾವು ನಿರ್ದೇಶನವನ್ನು ನೀಡಬೇಕು. ಮಾದಕ ವ್ಯಸನದಿಂದಾಗಿ ಜಿಲ್ಲೆಯ ಯುವಜನಾಂಗದ ಭವಿಷ್ಯವು ನುಚ್ಚುನೂರಾಗುತ್ತಿರುವುದರಿಂದ ಆದಷ್ಟು ಬೇಗ ಈ ಜಾಲವನ್ನು ಭೇದಿಸಿ ಇದರ ರೂವಾರಿಗಳನ್ನು ಪತ್ತೆಹಚ್ಚಲು ಪೋಲಿಸ್ ಇಲಾಖೆಗೆ ಆದೇಶಿಸಬೇಕೆಂದು ಮಾನವಿ ಮಾಡಿದರು.

Comments
Post a Comment