ಯಾವನ್ರೀ ಅವ್ನು ಪೆಟ್ರೋಲಿಯಂ ಮಂತ್ರಿ: ಸಿದ್ದರಾಮಯ್ಯ ಗುಡುಗು


ಬೆಂಗಳೂರು: ‘ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕಂತೆ. ಯಾವನ್ರೀ ಅವ್ನು ಪೆಟ್ರೋಲಿಯಂ ಮಂತ್ರಿ’ ಎಂದು ಧರ್ಮೇಂದ್ರ ಪ್ರಧಾನ್ ಹೆಸರನ್ನೂ ಹೇಳದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏರುಧ್ವನಿಯಲ್ಲಿ ಪ್ರಶ್ನಿಸಿದರು.
ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ದರ ಕಡಿಮೆ ಮಾಡದೆ, ಅದನ್ನು ರಾಜ್ಯಗಳ ಮೇಲೆ ಹೊರಿಸುತ್ತಿರುವುದನ್ನು ರಾಜಕೀಯ ಗಿಮಿಕ್ ಎನ್ನಬೇಕೋ, ನಾಟಕ ಎನ್ನಬೇಕೋ ನೀವೇ ನಿರ್ಧರಿಸಿ’ ಎಂದು ಹೇಳಿದರು.
‘ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 110ರಿಂದ 120 ಡಾಲರ್ ಇತ್ತು. ಆಗ ಪೆಟ್ರೋಲ್ ದರ ಲೀಟರ್‌ಗೆ ₹ 68 ಇತ್ತು. ಈಗ ಕಚ್ಚಾ ತೈಲ ದರ ಬ್ಯಾರಲ್‌ಗೆ 40ರಿಂದ 50 ಡಾಲರ್‌ಗೆ ಇಳಿದಿದೆ. ಪೆಟ್ರೋಲ್ ದರ ಲೀಟರ್‌ಗೆ ₹ 30ರಿಂದ ₹ 40 ಇರಬೇಕಿತ್ತು’ ಎಂದರು.
‘ತೈಲ ಬೆಲೆಗಳ ಮೇಲಿನ ಸಹಾಯಧನ ಹಿಂಪಡೆದಿರುವುದರಿಂದ ಕೇಂದ್ರ ಸರ್ಕಾರಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಉಳಿತಾಯವಾಗಿದೆ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ದರ ಯಾರು ಕಡಿಮೆ ಮಾಡಬೇಕು’ ಎಂದೂ ಪ್ರಶ್ನಿಸಿದರು.
‘ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ಬಂದ ಬಳಿಕ ಕೆಲವು ರಾಜ್ಯಗಳ ಆರ್ಥಿಕ ಸ್ಥಿತಿ ಕೆಟ್ಟದಾಗಿದೆ. 2004–05ರಲ್ಲಿ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದ ಕಾರಣ ನಮ್ಮಲ್ಲಿ ಜಿಎಸ್‌ಟಿ ಪರಿಣಾಮ ಅಷ್ಟಾಗಿ ಕಾಣುತ್ತಿಲ್ಲ. ಜಿಎಸ್‌ಟಿ ಜಾರಿ ಗುಜರಾತ್‌ನಲ್ಲಿ ಕಷ್ಟವಾಗಿದ್ದು, ನಮ್ಮ ರಾಜ್ಯದ ಅಧಿಕಾರಿಗಳನ್ನು ಕಳುಹಿಸಿ ಕೊಡಿ ಎಂದು ಕೇಳುತ್ತಿದ್ದಾರೆ’ ಎಂದರು.
‘ಸಣ್ಣ ಕೈಗಾರಿಕೆಗಳನ್ನು ಮೇಲೆತ್ತಲು ರಾಜ್ಯ ಸರ್ಕಾರ ಬದ್ಧವಾಗಿದೆ. ಹೊಸ ಕೈಗಾರಿಕಾ ನೀತಿಯನ್ನೂ ಜಾರಿಗೆ ತರಲಾಗಿದೆ. ದಲಿತರು ಮತ್ತು ಮಹಿಳೆಯರು ನವೋದ್ಯಮ ಆರಂಭಿಸಲು ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದರು.


Comments

Popular posts from this blog

ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರಿಂದ ಇಫ್ತಾರ್ ಕೂಟ

ರಂಝಾನ್ ಪ್ರಯುಕ್ತ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ವಿತರಿಸಿದ ಶಿಪಲ್ ರಾಜ್

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್