ಸಮಾನ ಮನಸ್ಕ ಸಂಘಟನೆಗಳಿಂದ 5 ದಿನಗಳ ಸದ್ಭಾವನಾ ಉಪವಾಸ ಸತ್ಯಾಗ್ರಹ
ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಕದಡಿ ಹೋಗಿರುವ ಸಮುದಾಯಗಳ ನಡುವಿನ ಸೌಹಾರ್ದ ಮತ್ತು ಸಹಕಾರಗಳನ್ನು ಮರುಪ್ರತಿಷ್ಠಾಪಿಸುವ ಸಲುವಾಗಿ ಐದು ದಿನಗಳ *"ಸದ್ಭಾವನಾ ಉಪವಾಸ ಸತ್ಯಾಗ್ರಹವನ್ನು"* ಹಮ್ಮಿಕೊಳ್ಳಲಾಗಿದೆ ಎಂದು ಇಂದು ಸಂಜೆ ಮಂಗಳೂರಿನ ವುಡ್ಲ್ಯಾಂಡ್ಸ್ ಹೋಟೆಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯರ್ಶಿಯಾದ ಪಿ.ವಿ ಮೋಹನ್ ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಕಾನೂನು ಕಟ್ಟಲೆಗಳನ್ನು ಅಣಕ ಮಾಡುವ ರೀತಿಯಲ್ಲಿ ಘಟನೆಗಳು ನಡೆಯುತಿದ್ದು, ಜನರ ವೈಯಕ್ತಿಕ ಬದುಕಿನ ಮೇಲಿನ ದಾಳಿಗಳನ್ನು ಅಲ್ಲಲ್ಲಿ ನೋಡುತ್ತಿದ್ದೇವೆ. ಜಾತೀಯವಾದ, ಧಾರ್ಮಿಕ ಅಸಹಿಷ್ಣುತೆ, ಮತಾಂದತೆ ಹಾಗೂ ಪ್ರತ್ಯೇಕತಾ ಮನೋಭಾವಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇಂತಹ ನಿರಾಶದಾಯಕವಾದ ಮತ್ತು ಹಿಂಸೆಯಿಂದ ರಾರಾಜಿಸುವ ಸನ್ನಿವೇಶದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಒಲವು, ನಿಲುವುಗಳನ್ನು ಮತ್ತೆ ಮರು ಸಂಘಟಿಸುವ ಅಗತ್ಯವಿದೆ ಅಲ್ಲದೆ ನಮ್ಮ ಸ್ವಾತಂತ್ರ್ಯ ಹೋರಾಟದ ಧ್ಯೇಯೋದ್ದೇಶಗಳಾಗಿದ್ದ ಪ್ರಜಾತಂತ್ರ, ಸೆಕ್ಯೂಲರ್ ವಾದ, ಸಾಮಾಜಿಕ ನ್ಯಾಯ ಮತ್ತು ಬಹು ಸಂಸ್ಕೃತಿಯನ್ನು ಜನ ಸಮುದಾಯದಲ್ಲಿ ಮತ್ತೆ ಹುಟ್ಟುಹಾಕುವ ಸಲುವಾಗಿ *ಜಿಲ್ಲೆಯ 5 ಬೇರೆ ಬೇರೆ ನಗರಗಳಲ್ಲಿ ಅಕ್ಟೋಬರ್ 31 ರಿಂದ ಡಿಸೆಂಬರ್ 6ರ ವರೆಗೆ 5 ದಿನಗಳ ಸದ್ಭಾವನಾ ಉಪವಾಸ ಸತ್ಯಾಗ್ರಹವು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ನಡೆಯಲಿದ್ದು* ಸಮಾನ ಮನಸ್ಕರು ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಕೆ.ಮೋಹನ್ಚಂದ್ರ ನಂಬಿಯಾರ್ , ಜಿಲ್ಲಾ ಯುವ ಕಾಂಗ್ರೆಸ್ನ ಉಪಾಧ್ಯಕ್ಷರಾದ ಲುಕ್ಮಾನ್ , ಸುಮಿತ್ ಡೇಸ, ಅಲ್ಪಸಂಖ್ಯಾತ ಕರಾವಳಿ ವಿಭಾಗದ ಅಧ್ಯಕ್ಷರಾದ ಯು.ಬಿ ಸಲೀಂ, ಉಳ್ಳಾಲ ನಗರ ಸಭೆಯ ಸದಸ್ಯರಾದ ಉಸ್ಮಾನ್ ಕಲ್ಲಾಪು, ಜಿಲ್ಲಾ ಯುವ ಕಾಂಗ್ರೆಸ್ನ ಪ್ರ.ಕಾರ್ಯದರ್ಶಿಗಳಾದ ನವೀದ್ ಅಖ್ತರ್ , ಶೈಲೇಶ್ ಕೊಟ್ಟಾರಿ, ಜಿಲ್ಲಾ ಯುವ ಇಂಟಕ್ನ ಅಧ್ಯಕ್ಷರಾದ ದೀಕ್ಷಿತ್ ಶೆಟ್ಟಿ, ಉಳ್ಳಾಲ ಯುವ ಕಾಂಗ್ರೆಸ್ನ ನಝರ್ ಮತ್ತು ಹೊನ್ನಯ್ಯರವರು ಉಪಸ್ಥಿತರಿದ್ದರು.

Comments
Post a Comment