ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಶುರು

ನವದೆಹಲಿ: ದೇಶದ ಹದಿಮೂರನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ  ಚುನಾವಣೆಗಾಗಿ  ಕೇಂದ್ರ ಚುನಾವಣಾ ಆಯೋಗ ಬುಧವಾರ ಅಧಿಸೂಚನೆ ಹೊರಡಿಸಿತು.
ಅಧಿಸೂಚನೆ ಹೊರಬಿದ್ದ ಕೆಲವೇ ತಾಸುಗಳಲ್ಲಿ ಮೂವರು ಹಿರಿಯ ಸಚಿವರನ್ನು ಒಳಗೊಂಡ ಬಿಜೆಪಿ ಉನ್ನತ ಸಮಿತಿಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು.

ರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿ ಯಾರೆಂದು ಬಿಜೆಪಿ ಮತ್ತು ಮಿತ್ರಪಕ್ಷಗಳು ವಾರದೊಪ್ಪತ್ತಿನಲ್ಲಿ ಸಾರಲಿವೆ. ಸರ್ಕಾರ ಇಳಿಸುವ ಹುರಿಯಾಳು ಯಾರೆಂದು ಕಾದು ನೋಡಿ ತಮ್ಮ ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೇ ಬೇಡವೇ ಎಂದು ಪ್ರತಿಪಕ್ಷಗಳು ತೀರ್ಮಾನಿಸಲಿವೆ.

ಪ್ರತಿಪಕ್ಷಗಳೂ ಒಪ್ಪಬಹುದಾದ ಅಭ್ಯರ್ಥಿಯನ್ನು ಹೂಡುವ ಸಂಬಂಧ ಬಿಜೆಪಿ ನೇಮಕ ಮಾಡಿರುವ ಉನ್ನತ ಸಮಿತಿಯ ಮೂವರು ಸದಸ್ಯರು ಮುಂಬರುವ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ಹಿರಿಯ ಸಚಿವರಾದ ರಾಜನಾಥ್ ಸಿಂಗ್, ವೆಂಕಯ್ಯನಾಯ್ಡು ಹಾಗೂ ಅರುಣ್ ಜೇಟ್ಲಿ ಉನ್ನತ ಸಮಿತಿಯ ಸದಸ್ಯರು.

ಬಿಜೆಪಿ ಮಿತ್ರಪಕ್ಷಗಳಲ್ಲದೇ ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಮಾಯಾವತಿ ಅವರ ಬಿಎಸ್‌ಪಿ ಜೊತೆ ಈ ಸಮಿತಿ ಈಗಾಗಲೇ ಸಮಾಲೋಚನೆ ನಡೆಸಿ ಬೆಂಬಲ ಕೋರಿದೆ.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಐದು ವರ್ಷಗಳ ಅಧಿಕಾರಾವಧಿ ಮುಂಬರುವ ಜುಲೈ 24ರಂದು ಮುಕ್ತಾಯಗೊಳ್ಳಲಿದೆ. ಪ್ರಧಾನಿ ಮೋದಿಯವರು ಇದೇ 24ರಂದು ಅಮೆರಿಕೆಯ ಭೇಟಿಗೆ ಪ್ರಯಾಣ ಬೆಳೆಸಲಿದ್ದಾರೆ. ಅವರ ನಿರ್ಗಮನಕ್ಕೆ ಮುನ್ನ 23ರಂದೇ ಎನ್.ಡಿ.ಎ. ಅಭ್ಯರ್ಥಿಯನ್ನು ಪ್ರಕಟಿಸಲಾಗುವುದು ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ಪ್ರತಿಪಕ್ಷಗಳ ನಾಯಕರಾದ ಶರದ್ ಯಾದವ್, ಸೀತಾರಾಂ ಯೆಚೂರಿ, ಡೆರೆಕ್ ಓ ಬ್ರಯನ್, ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ರಾಮಗೋಪಾಲ್ ಯಾದವ್, ಇಂದು ಇಲ್ಲಿ ಸಭೆ ಸೇರಿ ರಾಷ್ಟ್ರಪತಿ ಅಭ್ಯರ್ಥಿ ಕುರಿತು ಸಮಾಲೋಚನೆ ನಡೆಸಿದರು.


Comments

Popular posts from this blog

ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರಿಂದ ಇಫ್ತಾರ್ ಕೂಟ

ರಂಝಾನ್ ಪ್ರಯುಕ್ತ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ವಿತರಿಸಿದ ಶಿಪಲ್ ರಾಜ್

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್