ಚಾಂಪಿಯನ್ಸ್ ಟ್ರೋಫಿ ಭಾರತಕ್ಕೆ ಬಾಂಗ್ಲಾದೇಶ ಸವಾಲು
ಬರ್ಮಿಂಗ್‌ಹ್ಯಾಮ್: ಭರವಸೆಯ ಅಲೆ ಯಲ್ಲಿ ತೇಲುತ್ತಿರುವ ಭಾರತ ಮತ್ತು ಇತಿಹಾಸ ನಿರ್ಮಿಸುವ ನಿರೀಕ್ಷೆಯಲ್ಲಿರುವ ಬಾಂಗ್ಲಾದೇಶ ತಂಡಗಳು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಗುರುವಾರ ಸೆಣಸಲಿವೆ.
ಉತ್ತಮ ಲಯದಲ್ಲಿರುವ ಬ್ಯಾಟ್ಸ್ ಮನ್‌ಗಳು, ಪಂದ್ಯಕ್ಕೆ ಯಾವುದೇ ಸಂದರ್ಭದಲ್ಲಿ ತಿರುವು ನೀಡಬಲ್ಲ ಬೌಲರ್‌ಗಳು ಮತ್ತು ಎದುರಾಳಿಗಳ ಧೃತಿಗೆಡಿಸಬಲ್ಲ ಫೀಲ್ಡಿಂಗ್ ಭಾರತದ ಭರವಸೆ ಹೆಚ್ಚಿಸಿದೆ. ನ್ಯೂಜಿಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ನಂತರ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಬಾಂಗ್ಲಾದೇಶ ಫೈನಲ್ ಹಂತಕ್ಕೇರುವ ಕನಸು ಹೊತ್ತು ಎಜ್‌ಬಾಸ್ಟನ್ ಕ್ರೀಡಾಂಗಣಕ್ಕೆ ಇಳಿಯ ಲಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ಯಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯ.
ಪಾಕಿಸ್ತಾನವನ್ನು ಆರಂಭಿಕ ಪಂದ್ಯದಲ್ಲಿ ಮಣಿಸಿ, ದಕ್ಷಿಣ ಆಫ್ರಿಕಾ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿದ ಭಾರತ ನಾಲ್ಕರ ಘಟ್ಟದ ಪಂದ್ಯದಲ್ಲಿ ಜಯ ಗಳಿಸುವ ನೆಚ್ಚಿನ ತಂಡ ಎಂಬುದು ಕ್ರಿಕೆಟ್ ಲೋಕದ ಲೆಕ್ಕಾಚಾರ. ಆದರೆ ಯಾವುದೇ ಕ್ಷಣದಲ್ಲಿ ಪುಟಿದೇಳುವ ಸಹಜ ಗುಣ ಇರುವ ಬಾಂಗ್ಲಾದೇಶವನ್ನು ವಿರಾಟ್ ಕೊಹ್ಲಿ ಬಳಗ ಲಘುವಾಗಿ ಪರಿಗಣಿಸುವಂತಿಲ್ಲ.
2007ರ ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಭಾರತ ವನ್ನು ಈ ತಂಡ ಐದು ವಿಕೆಟ್‌ಗಳಿಂದ ಸೋಲಿಸಿತ್ತು. ಇಂಥ ಅಚ್ಚರಿಯ ಫಲಿತಾಂಶ ನೀಡಬಲ್ಲ ಸಾಮರ್ಥ್ಯ ತಂಡಕ್ಕೆ ಈಗಲೂ ಇದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ್ದು ಇದಕ್ಕೆ ಸಾಕ್ಷಿ. ಗುರುವಾರ ಗೆಲುವು ಸಾಧಿಸಿ ಮೊದಲ ಬಾರಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪ್ರವೇಶಿಸಲು ಮಷ್ರಫೆ ಮೊರ್ತಜಾ ಬಳಗ ತುದಿಗಾಲಲ್ಲಿ ನಿಂತಿರುವುದರಿಂದ ಭಾರತ ಎಚ್ಚರಿಕೆಯ ಹೆಜ್ಜೆ ಇರಿಸಬೇಕಾಗಿದೆ.
ಮೊದಲ ಎರಡು ಪಂದ್ಯಗಳಿಂದ ಹೊರಗೆ ಉಳಿದು ಮೂರನೇ ಪಂದ್ಯದಲ್ಲಿ ಅವಕಾಶ ಲಭಿಸಿದರೂ ಪರಿಣಾಮಕಾರಿಯಾಗದ ರವಿಚಂದ್ರನ್ ಅಶ್ವಿನ್ ಅವರಿಗೆ ಸೆಮಿಫೈನಲ್‌ನಲ್ಲಿ ಅವಕಾಶ ಸಿಗಬಹುದೇ ಎಂಬ ಕುತೂಹಲದ ಪ್ರಶ್ನೆಗೆ ಗುರುವಾರವಷ್ಟೇ ಉತ್ತರ ಸಿಗಲಿದೆ. ಅಶ್ವಿನ್ ಅವರನ್ನು ಹೊರಗುಳಿಸಿದರೆ ಉಮೇಶ್ ಯಾದವ್ ಅವರಿಗೆ ಮತ್ತೆ ಸ್ಥಾನ ಸಿಗುವ ಸಾಧ್ಯತೆ ಇದೆ. ಉಮೇಶ್ ಮೊದಲ ಪಂದ್ಯದಲ್ಲಿ 30 ರನ್‌ಗಳಿಗೆ ಮೂರು ವಿಕೆಟ್ ಕಬಳಿಸಿದ್ದರು.
ಎರಡನೇ ಪಂದ್ಯದಲ್ಲಿ ಒಂದೂ ವಿಕೆಟ್ ಗಳಿಸದ ಅವರು 67 ರನ್ ಬಿಟ್ಟುಕೊಟ್ಟಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಅಂಗಳಕ್ಕೆ ಇಳಿದ ಅಶ್ವಿನ್ ಒಂಬತ್ತು ಓವರ್‌ಗಳಲ್ಲಿ 43 ರನ್‌ಗಳಿಗೆ ಒಂದು ವಿಕೆಟ್ ಉರುಳಿಸಿದ್ದರು. ಮೊದಲ ಎರಡನೇ ಪಂದ್ಯದಲ್ಲಿ ಕಳಪೆ ಬೌಲಿಂಗ್ ಮಾಡಿದ್ದ ಭಾರತದ ಬೌಲರ್‌ಗಳು ಕೊನೆಯ ಪಂದ್ಯದಲ್ಲಿ ಮೊನಚಾದ ದಾಳಿ ಸಂಘಟಿಸಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.
ಮೂರು ವರ್ಷಗಳಿಂದ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿರುವ ಬಾಂಗ್ಲಾದೇಶ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಈ ತಂಡದ ಸೆಮಿ ಪ್ರವೇಶಕ್ಕೆ ಅದೃಷ್ಟವೂ ಕಾರಣವಾಗಿತ್ತು.
ಮೂರು ವರ್ಷಗಳಿಂದ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿರುವ ಬಾಂಗ್ಲಾದೇಶ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಈ ತಂಡದ ಸೆಮಿ ಪ್ರವೇಶಕ್ಕೆ ಅದೃಷ್ಟವೂ ಕಾರಣವಾಗಿತ್ತು.
ಸದ್ಯ ಭಾರತ ತಂಡದ ಯಾವ ಆಟಗಾರನೊಂದಿಗೆ ಕೂಡ ಬಾಂಗ್ಲಾ ಆಟಗಾರರನ್ನು ಹೋಲಿಸಲು ಸಾಧ್ಯವಿಲ್ಲ. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರ ಆರಂಭಿಕ ಜೊತೆಯಾಟ ಟೂರ್ನಿಯುದ್ದಕ್ಕೂ ಎದುರಾಳಿ ಬೌಲರ್‌ಗಳ ಬೆವರಿಳಿಸಿದೆ. ವಿರಾಟ್ ಕೊಹ್ಲಿ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಹೇಂದ್ರ ಸಿಂಗ್ ದೋನಿಯಂತೂ 50 ಓವರ್‌ಗಳ ಪಂದ್ಯದ ‘ರಾಜ’ ಎಂಬ ಹೆಸರು ಗಳಿಸಿದ್ದಾರೆ. ಯುವರಾಜ್ ಸಿಂಗ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಮುಂತಾದವರು ಪರಿಣಾಮಕಾರಿಯಾಗಿ ಬೆಳೆದಿದ್ದಾರೆ.
ಅತ್ತ ಬಾಂಗ್ಲಾದೇಶ ತಂಡದಲ್ಲಿ ತಮೀಮ್ ಇಕ್ಬಾಲ್ ಉತ್ತಮ ರನ್ ಸರಾಸರಿ ಉಳಿಸಿಕೊಂಡಿದ್ದರೂ ಅವರ ಆರಂಭಿಕ ಜೊತೆಗಾರ ಸೌಮ್ಯ ಸರ್ಕಾರ್ ಗುಂಪು ಹಂತದ ಪಂದ್ಯಗಳಲ್ಲಿ ಗಮನ ಸೆಳೆಯಲು ವಿಫಲರಾಗಿದ್ದಾರೆ. ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಇಮ್ರುಲ್ ಕೈಸ್ ಮತ್ತು ಮಧ್ಯಮ ಕ್ರಮಾಂಕದ ಶಬ್ಬೀರ್ ರಹಮಾನ್‌ಗೂ ಪರಿಣಾಮ ಬೀರಲು ಆಗಲಿಲ್ಲ. ಮುಷ್ಫಿಕುರ್ ರಹೀಮ್ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಕಲೆಯನ್ನು ಇನ್ನೂ ಕರಗತ ಮಾಡಿಕೊಂಡಿಲ್ಲ. ಹೀಗಾಗಿ ಶಕೀಬ್ ಅಲ್ ಹಸನ್ ಮತ್ತು ಮೊಹಮ್ಮದುಲ್ಲ ಅವರ ಮೇಲೆ ಈ ತಂಡ ಭರವಸೆ ಅಪಾರ ನಿರೀಕ್ಷೆ ಇರಿಸಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರ ಅಬ್ಬರದ ಆಟ ತಂಡವನ್ನು ಜಯದ ದಡ ಸೇರಿಸಿತ್ತು.
ನಾಯಕ ಮಷ್ರಫೆ ಮೊರ್ತಜಾ ಮತ್ತು ಮುಸ್ತಫಿಜುರ್ ರಹಮಾನ್ ಹೊಸ ಚೆಂಡನ್ನು ನಿರೀಕ್ಷೆಗೆ ತಕ್ಕಂತೆ ಬಳಸಲು ವಿಫಲರಾಗಿದ್ದಾರೆ. ಹೀಗಾಗಿ ಟಸ್ಕಿನ್ ಅಹಮ್ಮದ್ ಮತ್ತು ಮೊಸಾಡೆಕ್ ಹೊಸೈನ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ

Comments
Post a Comment