ಕೇಂದ್ರ ಸರ್ಕಾರ ಸುಳ್ಳನ್ನೇ ಸತ್ಯವನ್ನಾಗಿ ಬಿಂಬಿಸಿ ಎಲ್ಲರನ್ನೂ ಮೌನವಾಗಿಸಲು ಹೊರಟಿದೆ: ರಾಹುಲ್ ಗಾಂಧಿ
ಬೆಂಗಳೂರು: " ಕೇಂದ್ರ ಸರ್ಕಾರ ಸುಳ್ಳು ಹೇಳುತ್ತ ನಡೆದಿದ್ದು, ಸದ್ಯ ಭಾರತದಲ್ಲಿ ಮೌನದಿಂದ ಸತ್ಯವನ್ನು
ಪಲ್ಲಟಗೊಳಿಸಲಾಗುತ್ತಿದೆ. ದೇಶದ ಜನರ ಮೌನ ಸುಳ್ಳಾಗಿ ಪರಿವರ್ತನೆಯಾಗುತ್ತಿದೆ' ಎಂದು ಎಐಸಿಸಿ ಉಪಾಧ್ಯಕ್ಷ
ರಾಹುಲ್ ಗಾಂಧಿ ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮರು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
"ಕೇಂದ್ರ ಸರ್ಕಾರ ಸುಳ್ಳನ್ನೇ ಸತ್ಯವನ್ನಾಗಿ ಬಿಂಬಿಸಿ ಎಲ್ಲರನ್ನೂ ಮೌನವಾಗಿಸಲು ಹೊರಟಿದೆ. ಸತ್ಯ ಮಾತನಾಡಲು
ಯಾರೂ ಹಿಂಜರಿಯಬೇಕಿಲ್ಲ' ಎಂದು ಹೇಳಿದರು. ದೇಶದಲ್ಲಿ ಎಲ್ಲರೂ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ರೈತರು, ದಲಿತರು, ಪತ್ರಕರ್ತರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ. ಯಾರೂ ತಮ್ಮಿಚ್ಛೆಯಂತೆ ಜೀವನ ನಡೆಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪತ್ರಕರ್ತರೂ ಕೂಡ ತಮಗನಿಸಿದ್ದನ್ನು ಮುಕ್ತವಾಗಿ ಬರೆಯಲೂ ಕೂಡ ಅವಕಾಶವಿಲ್ಲದಂತಾಗಿದೆ. ಆದರೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮೌನ ವಹಿಸದೆ ಸತ್ಯ ಹೇಳಲು ಹಿಂಜರಿಯುವುದಿಲ್ಲ. ಭಾರತದ ಸ್ವಾತಂತ್ರ್ಯ ಕವಲು ದಾರಿಯಲ್ಲಿದ್ದು, ಪ್ರಜಾಪ್ರಭುತ್ವದ ಉಳಿವಿಗಾಗಿ ಸಂಘರ್ಷ ನಡೆಸಬೇಕಿದೆ ಎಂದು ಹೇಳಿದರು.
ನೂತನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಭಾರತದಲ್ಲಿ ಪತ್ರಿಕೋದ್ಯಮದ ಇತಿಹಾಸ ಸ್ವಾತಂತ್ರ್ಯ ಹೋರಾಟದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಪತ್ರಕರ್ತರು ಕೇವಲ ಸುದ್ದಿಯನ್ನು ಮಾತ್ರ ನೀಡುವವರಾಗಿರಲಿಲ್ಲ. ಅವರು ದೇಶವನ್ನು ವಿದೇಶಿ ಆಡಳಿತದಿಂದ ಪಾರು ಮಾಡಲು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಅಲ್ಲದೇ ನಮ್ಮ ಸಮಾಜದಲ್ಲಿನ ಮೂಢನಂಬಿಕೆ, ಜಾತೀಯತೆ, ಕೋಮುವಾದ ಹಾಗೂ ತಾರತಮ್ಯ ತೊಡೆದು ಹಾಕಲು ಪರಿಶ್ರಮ ಪಟ್ಟ ಸಾಮಾಜಿಕ ಕಾರ್ಯಕರ್ತರೂ ಆಗಿದ್ದರು ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್‌ನ ಅನೇಕ ನಾಯಕರು ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕಾರಂಗ ಜನರಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಗಾಂಧೀಜಿ ಕೂಡ ತಮ್ಮ ಹರಿಜನ ಮತ್ತು ಯಂಗ್ ಇಂಡಿಯಾ ಪತ್ರಿಕೆಗಳ ಮೂಲಕ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸೆಳೆಯಲು ಬಳಸಿಕೊಂಡರು. ಪತ್ರಿಕಾ ರಂಗ ಜೀವನೋಪಾಯಕ್ಕೆ ಬಳಸಿಕೊಂಡರೆ, ಅದರ ಮೂಲ ಉದ್ದೇಶ ಬದಲಾಗಿ ಲಾಭಗಳಿಕೆಗೆ ಅಕ್ರಮಗಳು ಹೆಚ್ಚಾಗುವ ಅಪಾಯವಿದೆ ಎಂದು ಹೇಳಿದರು. ಮುಕ್ತ ಸಮಾಜಕ್ಕೆ ಸ್ವತಂತ್ರ ಮಾಧ್ಯಮ ಅತ್ಯಗತ್ಯ. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ, ನಾಗರಿಕರ ಹಕ್ಕುಗಳೂ ಗಂಡಾಂತರಕ್ಕೀಡಾಗುತ್ತವೆ. ಮಾಧ್ಯಮಗಳ ಮೇಲಿನ ನಿಯಂತ್ರಣ ದುರಾಚಾರಗಳಿಗೆ ಕಾರಣವಾಗಬಲ್ಲದು. ಪತ್ರಿಕಾ ರಂಗ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಂವಿಧಾನದಲ್ಲಿಯೇ
ಅವಕಾಶ ಕಲ್ಪಿಸಲಾಗಿದೆ. ಪತ್ರಿಕಾರಂಗ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸರ್ಕಾರಗಳು ಅಗತ್ಯ ಕ್ರಮ
ಕೈಗೊಳ್ಳಬೇಕು ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ರಾಜ್ಯಸಭೆ ಸದಸ್ಯರಾದ ಆಸ್ಕರ್ ಫರ್ನಾಂಡಿಸ್, ರೆಹಮಾನ್ ಖಾನ್, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸಂಪಾದಕ ನೀಲಬ್ ಮಿಶ್ರಾ ಉಪಸ್ಥಿತರಿದ್ದರು.
20ರಂದು ದಿಲ್ಲಿಯಲ್ಲಿಅಧಿಕೃತ ಬಿಡುಗಡೆ
ಜೂ.20ರಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ದೆಹಲಿಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಈ ವಾರಪತ್ರಿಕೆಯ ಮುದ್ರಿತ ಆವೃತ್ತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ
ನವದೆಹಲಿಯಿಂದಲೇ ಪತ್ರಿಕೆ ಪ್ರಕಟಗೊಳ್ಳಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
Comments
Post a Comment