ಮೋದಿಯ ಸ್ವಚ್ಚ ಭಾರತ ಅಭಿಯಾನಕ್ಕೆ ತನ್ನದೆ ಮಂತ್ರಿಯಿಂದ ಮೂತ್ರದ ಕೊಡುಗೆ
ನವದೆಹಲಿ, ಜೂ.30-ಸ್ವಚ್ಚ ಭಾರತ ಅಭಿಯಾನದ ಅಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಒಂದೆಡೆ ದೇಶಾದ್ಯಂತ ಪ್ರಚಾರ ಮಾಡುತ್ತಿದ್ದರೆ, ಇನ್ನೊಂದೆಡೆ ಅವರ ಸಂಪುಟದ ಹಿರಿಯ ಸಚಿವರೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಮೂತ್ರವಿಸರ್ಜನೆ ಮಾಡಿ ಕ್ಲೀನ್ ಇಂಡಿಯಾ ಆಂದೋಲನವನ್ನು ನಗೆಪಾಟಲಿಗೆ ಗುರಿ ಮಾಡಿದ್ದಾರೆ. ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ತಮ್ಮ ಸಿಬ್ಬಂದಿಗಳ ಉಪಸ್ಥಿತಿ ಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದಾರೆ. ಸಚಿವರು ಗೋಡೆಗೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಹಾಗೂ ಅಂಗರಕ್ಷಕರು ಸಿಂಗ್ ಅವರ ಸುತ್ತ ನಿಂತಿರುವುದು ಚಿತ್ರದಲ್ಲಿ ಗೋಚರಿಸುತ್ತಿದೆ.
ಮಂತ್ರಿಮಹೋದಯರ ಕಾರು ಸಹ ಹತ್ತಿರದಲ್ಲಿದೆ. ಕೇಂದ್ರ ಸಚಿವರು ಅನಾಗರಿಕರಂತೆ ಯಾವ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ರಾಧಾ ಸಿಂಗ್ ಅವರ ಮೂತ್ರ ವಿಸರ್ಜನೆಯ ಚಿತ್ರಗಳು ಸಾರ್ವಜನಿಕವಾಗಿ ವ್ಯಾಪಕ ಟೀಕೆ ಮತ್ತು ಗೇಲಿಗೆ ಒಳಗಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ಮೋದಿ, ಸಚಿವರು ಮತ್ತು ಸರ್ಕಾರದ ಸ್ವಚ್ಚ ಭಾರತ ಅಭಿಯಾನವನ್ನು ಲೇವಡಿ ಮಾಡಲಾಗುತ್ತಿದೆ.
ಸ್ವಚ್ಚ ಭಾರತ ಅಭಿಯಾನದ ಅಡಿ ಮೋದಿ ಸರ್ಕಾರ ದೇಶಾದ್ಯಂತ ಕೋಟಿಗಟ್ಟಲೇ ಹಣ ಸುರಿದು ಶೌಚಾಲಯಗಳನ್ನು ನಿರ್ಮಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜನೆ ಮಾಡದಂತೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವಾಗಲೇ ಹಿರಿಯ ಸಚಿವರ ಈ ವರ್ತನೆ ಈಗ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.


Comments
Post a Comment